Uncategorized

ಓಂ ಬೀಚ್‌ಗೆ ಪ್ರವಾಸಿಗರ ಲಗ್ಗೆ: ನೀರಿನಲ್ಲಿ ಮೋಜಿನಾಟ

ಓಂ ಬೀಚ್‌ಗೆ ಪ್ರವಾಸಿಗರ ಲಗ್ಗೆ: ನೀರಿನಲ್ಲಿ ಮೋಜಿನಾಟ

 

ಗೋಕರ್ಣ: ಗೋಕರ್ಣಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುವುದರ ಜತೆಗೆ ವಾರಾಂತ್ಯದಲ್ಲಿ ದುಪ್ಪಟ್ಟಾಗುತ್ತದೆ. ಹೀಗಾಗಿ ಇಲ್ಲಿಯ ವ್ಯಾಪಾರ ವಹಿವಾಟುಗಳು ಕೂಡ ಚೆನ್ನಾಗಿಯೇ ನಡೆಯುತ್ತಿವೆ. ಹಾಗೇ ಗೋಕರ್ಣದ ಹಲವು ಕಡೆಗಳಲ್ಲಿ ರೆಸಾರ್ಟ್, ಹೋಮ್‌ಸ್ಟೇಗಳು ತಲೆ ಎತ್ತಿದ್ದು ಅವುಗಳು ಕೂಡ ಈಗ ಲಾಭದಾಯಕವಾಗಿವೆ.

ಪ್ರತಿಯೊಬ್ಬರು ಪ್ರತಿಯೊಂದು ಪ್ರವಾಸಿಗರು ಕೂಡ ಇಲ್ಲಿಯ ಪ್ರಮುಖ ತಾಣವಾಗಿರುವ ಓಂ ಬೀಚ್‌ಗೆ ಭೇಟಿ ನೀಡಿ ತೆರಳುತ್ತಿದ್ದಾರೆ. ಹಾಗೆ ಇಲ್ಲಿ ಸಿಗುವ ಬೋಟ್‌ಸೇರಿದಂತೆ ಇನ್ನಿತರ ಮೋಜು ಮಸ್ತಿಗಳಿಗೆ ಎಲ್ಲ ರೀತಿಯ ಪರಿಕರಗಳು ಸಿಗುವುದರಿಂದ ಓಂ ಬೀಚ್ ಎಲ್ಲ ಬೀಚಗಳಿಗಿಂತ ಭಿನ್ನವಾಗಿದೆ. ಹೀಗಾಗಿ ಸಹಜವಾಗಿಯೇ ಇಲ್ಲಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.

ಇಲ್ಲಿ ಉತ್ತಮ ಬಿಸಿಲಿನ ವಾತಾವರಣ ಉಂಟಾದರೆ ತಂಪುಪಾನೀಯಗಳು ಅತಿಹೆಚ್ಚಿನ ರೀತಿಯಲ್ಲಿ ಮಾರಾಟವಾಗುತ್ತವೆ. ಜತೆಗೆ ಸೂರ್ಯಾಸ್ತದ ಸೊಬಗನ್ನು ಪ್ರವಾಸಿಗರು ಸವಿಯಲು ಅನುಕೂಲವಾಗುತ್ತದೆ. ಆದರೆ ಕಳೆದ ಎರಡು ದಿನಗಳಿಂದ ಸಂಜೆಯಾಗುತ್ತಿದ್ದಂತೆಯೇ ಮೋಡ ಕವಿದ ವಾತಾವರಣ ಇರುವುದರಿಂದ ಸೂರ್ಯಾಸ್ತದ ಸೊಬಗನ್ನು ಪ್ರವಾಸಿಗರು ಸವಿಯಲು ಸಾಧ್ಯವಾಗುತ್ತಿಲ್ಲ.

ಈ ಹಿಂದೆ ವಿದೇಶಿಗರ ಸಂಖ್ಯೆಯೇ ಅಧಿಕವಾಗಿತ್ತು. ಬಹುತೇಕ ಗೋಕರ್ಣವನ್ನು ಇಂದು ವಿಶ್ವದಲ್ಲಿ ಭೂಪಟದಲ್ಲಿ ನೋಡುತ್ತೇವೆ ಎಂದರೆ ಅದಕ್ಕೆ ಮೂಲ ಕಾರಣ ವಿದೇಶಿ ಪ್ರವಾಸಿಗರು. ಆದರೆ ಈಗ ಕೊರೊನಾ ನಂತರ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗೇ ನೋಡಿದರೆ ಈ ವರ್ಷ ಒಂದಿಷ್ಟು ವಿದೇಶಿ ಪ್ರವಾಸಿಗರು ಆಗಮಿಸಿದ್ದರು. ಆದರೆ ಅವರು ಕೂಡ ಈಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿಲ್ಲ. ಹೀಗಾಗಿ ದೇಶಿ ಪ್ರವಾಸಿಗರು ಇಲ್ಲಿ ತುಂಬಿತುಳುಕುತ್ತಿದ್ದಾರೆ.

ವಿದೇಶಿಗರಿಗೆ ಹೋಲಿಸಿದರೆ ದೇಶಿ ಪ್ರವಾಸಿಗರಿಂದಲೇ ಹೆಚ್ಚಿನ ಆದಾಯವಾಗುತ್ತದೆ ಎಂದು ರೆಸಾರ್ಟ್, ಹೊಟೇಲ್, ಹೋಮ್‌ಸ್ಟೇ ಮಾಲೀಕರೇ ಪ್ರತಿಕ್ರಯಿಸುತ್ತಾರೆ. ಒಟ್ಟಿನಲ್ಲಿ ಗೋಕರ್ಣ ಭಕ್ತರ ಪಾಲಿಗೆ ದಕ್ಷಿಣದ ಕಾಶಿಯಾದರೆ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಓಂ ಬೀಚ್‌ನಲ್ಲಿ ಪ್ರವಾಸಿಗರ ಈಜಾಟಕ್ಕೆ ಗಡಿ ಗುರುತು ಮಾಡಿ ಅಲ್ಲಿಯವರೆಗೆ ತೇಲುವ ದಾರವನ್ನು ಹಾಕಿದ್ದಾರೆ. ಇದರಿಂದಾಗಿ ಆ ಗಡಿಯನ್ನು ದಾಟಿ ಹೋಗಲು ಸಾಧ್ಯವಾಗುತ್ತಿಲ್ಲ. ಅಷ್ಟರಮಟ್ಟಿಗಾದರೂ ಪ್ರವಾಸೋದ್ಯಮ ಇಲಾಖೆ ಜಾಗೃತಗೊಂಡಿರುವುದು ತಕ್ಕಮಟ್ಟಿಗೆ ಸ್ಪಂದನೆ ಸಿಕ್ಕಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!