ಗೋಕರ್ಣ ಸಮುದ್ರದಲ್ಲಿ ಮುಳುಗಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯರಿಬ್ಬರು ಸಾವು
ಗೋಕರ್ಣ ಸಮುದ್ರದಲ್ಲಿ ಮುಳುಗಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿಯರಿಬ್ಬರು ಸಾವು

ಕುಮಟಾ: ತಮಿಳುನಾಡಿನ ತಿರುಚಿಯ ಎಸ್.ಆರ್.ಎಮ್ ಮೆಡಿಕಲ್ ಕಾಲೇಜಿನ ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿನಿಯರಿಬ್ಬರು ಗೋಕರ್ಣದ ಜಟಾಯುತೀರ್ಥ ಗುಡ್ಡದ ಬಳಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್(23) ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ.
ಘಟನೆಯ ವಿವರ: ತಿರುಚಿಯ ಎಸ್.ಆರ್.ಎಮ್ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿನಿಯರು ಚೆನ್ನೈನ ವೆಟ್ರಿ ಟೂರ್ಸ್ & ಟ್ರಾವೆಲ್ಸ್ ಮೂಲಕ ದಾಂಡೇಲಿ, ಗೋಕರ್ಣ ಮತ್ತು ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಗುರುವಾರ ದಾಂಡೇಲಿಯಿಂದ ಅಂಕೋಲಾದ ವಿಭೂತಿ ಫಾಲ್ಸ್ ನೋಡಿದ ನಂತರ ಸಂಜೆ ಗೋಕರ್ಣ ತಲುಪಿದ್ದರು. ಅಲ್ಲಿನ ಟೂರ್ ಗೈಡ್ ಗಾಂಧಿ ಸಿವಕುಮಾರ್ (23), ಸೂರ್ಯಾಸ್ತ ನೋಡಲು ಕುಡ್ಲೆ ಬೀಚ್ ಬಳಿಯ ಜಟಾಯುತೀರ್ಥ ಸಮುದ್ರ ತೀರಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ದಿದ್ದರು. ಸಂಜೆ 6:20 ರ ಸುಮಾರಿಗೆ, ಇಬ್ಬರು ವಿದ್ಯಾರ್ಥಿನಿಯರು ಭಾರೀ ಅಲೆಗಳಿಗೆ ಸಿಕ್ಕು ಸಮುದ್ರದಲ್ಲಿ ಕೊಚ್ಚಿಕೊಂಡು ಹೋದರು.
ಸ್ಥಳೀಯರಾದ ಮಣಿರಾಜು ರಕ್ಷಣೆಗೆ ಧಾವಿಸಿದರೂ, ಅವರೂ ಅಪಾಯಕ್ಕೆ ಸಿಲುಕಿದರು. ನಂತರ ಅಡ್ವೆಂಚರ್ ಬೋಟ್ ಮೂಲಕ ಇಬ್ಬರು ವಿದ್ಯಾರ್ಥಿನಿಯರನ್ನು ಮತ್ತು ಮಣಿರಾಜು ಅವರನ್ನು ದಡಕ್ಕೆ ತರಲಾಯಿತು. ಆದರೂ, ವಿದ್ಯಾರ್ಥಿನಿಯರಾದ ಕನ್ನಿಮೋಳಿ ಮತ್ತು ಹಿಂದುಜಾ ಪ್ರಾಣವನ್ನು ಕಳೆದುಕೊಂಡರು. ಮಣಿರಾಜು ಬದುಕುಳಿದರೆ, ಉಳಿದ ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಇಲ್ಲದಿರುವುದರಿಂದ, ಮೃತದೇಹಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿದ್ಯಾರ್ಥಿನಿಯರ ಸಾವಿಗೆ ಟೂರ್ ಗೈಡ್ ಮತ್ತು ಟೂರ್ ಆಪರೇಟರ್ ನಿರ್ಲಕ್ಷ್ಯದ ಹಿನ್ನಲೆ, ಗೋಕರ್ಣ ಪೋಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.