ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ 8 ದರೋಡೆಕೋರರ ಸೆರೆ
ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ 8 ದರೋಡೆಕೋರರ ಸೆರೆ

ಮುಂಡಗೋಡ: ಚಾಕು, ರಾಡು, ಖಾರದಪುಡಿ ಹಿಡಿದು ದಾರಿಹೋಕರನ್ನು ಬೆದರಿಸಿ ಹಣ-ಆಭರಣ ದೋಚುತ್ತಿದ್ದ 8 ಡಕಾಯಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿತರಲ್ಲಿ ಕೆಲವರು ಇನ್ನಿತರ ಅಪರಾಧ ಕೃತ್ಯದಲ್ಲಿಯೂ ಭಾಗಿಯಾದವರಾಗಿದ್ದಾರೆ.
ಫೆಬ್ರವರಿ 7ರ ನಸುಕಿನಲ್ಲಿ ಮುಂಡಗೋಡ ತಾಲೂಕಿನ ಬಡಿಗೇರಿ ಗ್ರಾಮ ಪ್ರವೇಶಿಸುವ 1 ಕಿಮೀ ಹಿಂದೆ ಅನುಮಾನಾಸ್ಪದ ರೀತಿಯಲ್ಲಿ ಕಾರು ನಿಂತಿತ್ತು. ಆ ಕಾರಿನಲ್ಲಿ ಕಬ್ಬಿಣದ ರಾಡು, ಕಟ್ಟಿಗೆಯ ಬಡಿಗೆಗಳನ್ನು ಇರಿಸಿದ್ದ ಎಂಟು ಜನ ದಾರಿಯಲ್ಲಿ ಹೋಗುವವರನ್ನು ಬೆದರಿಸುತ್ತಿದ್ದರು. ಮುಂಡಗೋಡ ಕಿಲ್ಲೆ ಓಣಿಯ ಜಾಹೀರ ಶೇಖ್, ಹರುಣ ಶೇಖ್, ಮಹಮದ್ ಯೂಸೂಫ್ ಹಣ ವಸೂಲಿ ಮಾಡುತ್ತಿದ್ದರು.
ಚೌಡಳ್ಳಿಯ ಮಹಮದ್ ಇಬ್ರಾಹಿಂ, ಮಾರಿಕಾಂಬಾ ನಗರದ ಶಾಹಿಲ್ ನಂದಿಗಟ್ಟಿ, ದೇಶಪಾಂಡೆನಗರದ ಮಹಮದ್ ಪಾನವಾಲೆ, ಇಂದಿರಾನಗರದ ತನ್ವಿಲ್ ಅಕ್ಕಿಆಲೂರ್ ಹಾಗೂ ನೂರಾನ್‌ಗಲ್ಲಿಯ ದಾದಾಕಲಂದರ್ ಸಹ ಅವರ ಜೊತೆಗಿದ್ದರು.
ಡಕಾಯಿತರ ಬಗ್ಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಮಾಹಿತಿ ಸಿಕ್ಕಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ ಹಾಗೂ ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಅವರಿಗೆ ಸೂಚನೆ ರವಾನಿಸಿದರು.
ಅದರಂತೆ ಮುಂಡಗೋಡಿನ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ್ ತಕ್ಷಣ ಆ ಸ್ಥಳಕ್ಕೆ ಹೋದರು. ಪಿಎಸ್‌ಐ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಡಿ, ಪೊಲೀಸ್ ಸಿಬ್ಬಂದಿ ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಗೇರಿ ಸೇರಿ ಅಲ್ಲಿದ್ದ ಎಂಟು ಜನರನ್ನು ವಶಕ್ಕೆ ಪಡೆದರು.
ಬಂಧಿತರ ಕಾರಿನಲ್ಲಿ ಎರಡು ಬಡಿಗೆ, ಮೂರು ರಾಡುಗಳಿದ್ದವು. ಚಾಕು, ಖಾರದಪುಡಿ ಸಹ ಸಿಕ್ಕಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.